Saturday, December 27, 2014

ಮಾಘಿಯ ಚಳಿಗೆ ಮೈ ಮನಸು 
ಗದಗುಟ್ಟಿದೆ.. 
 ನಿನ್ನವೊಂದಿಷ್ಟು ಬಿಸಿಮುತ್ತುಗಳ 
ಕಳಿಸಿಕೊಡು ದೊರೆಯೇ .. 
ರಜಾಯಿ ಹೊಲಿದು ಹೊದ್ದುಕೊಳ್ಳುತ್ತೇನೆ . 
             **

ಇಬ್ಬನಿಯನು ಪ್ರೀತಿಸಿದರೆ ಹೀಗೇ 
ಆರಿಸಿಕೊಳ್ಳುವ ಮುನ್ನವೇ 
ಆವಿಯಾಗುವ ಭಯವಿರುತ್ತದೆ . 
             **

ಮಾಘಿಯ ಮೋಹಕ ಬಿಸಿಲೇ .. 
ಮಂಜುಗಟ್ಟಿದ ಅವನೆದೆಯನ್ನೊಮ್ಮೆ ಮುಟ್ಟಿ ಬಾ 
ಕರಗಲಿ ಅವನ ಮುನಿಸು ಬೇಸರ 
ಹರಿಯಲಿ ತಡೆದಿಟ್ಟ ಪ್ರೇಮ .. 
ಸುರಿಯಲಿ ಇಬ್ಬನಿ 
ತೊಡೆಯಲೆನ್ನ ಕಂಬನಿ ..
            **

ನಿನ್ನ ವಿರಹದುರಿಗೆ 
ಹೂಗಳು ಸುಡುತ್ತಿವೆ .. 
ಓ ಇಬ್ಬನಿಯೇ .. 
ಮುತ್ತಾಗಿ ಒಮ್ಮೆ ಹನಿದು ಬಿಡು
           **

ಎದೆಯೊಳಗೆ ಬಿಡುವಿಲ್ಲದೆ 
ಅರಳಿಕೊಳ್ಳುತ್ತಿರುವ ಅದೆಷ್ಟೋ ಪುಳಕದ ಹೂಗಳ
 ನೇಯ್ದು ಮಾಲೆಯಾಗಿಸಬೇಕಿದೆ 
ಆದರೆ
 ಅವನ ಪ್ರೇಮದ  ತೀವ್ರತೆಗೆ
 ಪದಗಳು ಚೆದುರಿ ..ಕವಿತೆಯೂ ಸೋಲುತ್ತಿದೆ 
ಓ ಶಿಶಿರದ ತಂಗಾಳಿಯೇ 
ಈ ಒಲವ ಪರಿಮಳವನ್ನಷ್ಟು ಹೊತ್ತು ಹೋಗು 
ಕಡಲ ತೀರದ ನನ್ನ ದೊರೆಗೆ ನೀಡು 

            **

 ಕೆನ್ನೆಗೆ ಅರಸಿನ ಹಚ್ಚಿ ಮಲಗಿದ 
ನೆನಪಿತ್ತು.. 
ಬೆಳಗೆದ್ದಾಗ ರಂಗು ಕರಗಿತ್ತು .. 
ಕಾವಳದ ರಾತ್ರಿಯಲಿ 
ಮಾಯಕದ ಬೆಕ್ಕು 
ಹಾಲು ನೆಕ್ಕಿ ಹೋಗಿತ್ತು .. 
ನಿನ್ನೊಲವಿನಂತೆ  ಅರಳಿಕೊಂಡ 
ಮುಂಜಾನೆ ಹೂಗಳಿಗೆ 
ತುಟಿಯೊತ್ತಿದ ಕಳ್ಳ ಇಬ್ಬನಿ 
ಹುಳ್ಳಗೆ ನಗುತ್ತಿತ್ತು..
      ***

ಎದೆಯೊಳಗೆ ಕೆಂಡ 
ಮಳೆಗರೆಯುತ್ತಿತ್ತು 
ಬೇಸರದ ಬಿಸಿಲು 
ನೆತ್ತಿ ತೋಯಿಸುತ್ತಿತ್ತು ..
ಯಾವ ಜನ್ಮದ 
​ಋಣವೋ .. 
ಅಕಳಂಕಿತ ​ಇಬ್ಬನಿ 
ತುಟಿಯೊತ್ತಿ ಹೇಳಿತು .. 
ಬಾ ಗೆಳತಿ ,
ನೀರಡಿಸಿಕೋ ..
       ***

ಬದುಕು ಚಳಿಗಾಲದ ಸಂಜೆಯ
ಒಂಟಿತನದಂತೆ ಕ್ರೂರವಾಗಿತ್ತು
ಶಿಶಿರದ ಶೀತಲತೆಯಲಿ
ಭರವಸೆಗಳು ಕೂಡ ಉದುರಿಹೋಗಿ 
​ಬಾಳು ಬೋಳು ಬೋಳಾಗಿತ್ತು .. 
​ದೊರೇ ,
ನೀ ಬಂದದ್ದೇ ನೋಡು ! 
ನಾ ವಸಂತ ಚುಂಬಿಸಿದ ಹೂ ಬನವಾಗಿದ್ದೇನೆ . 
          ***

ಕರುಣೆಯಿಲ್ಲದ ಚಳಿಗಾಲದ ರಾತ್ರಿಯೇ 
ನಿನಗೆ ಏನನ್ನಲಿ .. 
ನಲ್ಲನಿಲ್ಲದ ಹೊತ್ತಿಗಿಷ್ಟು ನಿದ್ರೆಯನಾದರೂ 
ಜಾರಿಗೊಳಿಸು ..
ಅವನ ಕನಸಿನ ಕಾವಿನಲಾದರೂ 
ತುಸು ಬೆಚ್ಚಗಾಗುತ್ತೇನೆ . 
           **

ನಿನ್ನ ನೆನಪಿನ ಅಗ್ಗಿಷ್ಟಿಕೆಯಲ್ಲಿ 
ಚಳಿ ಕಾಯಿಸಿಕೊಳ್ಳುತ್ತಿದ್ದೇನೆ 
ಮಧುರವಾಗಿ ಉರಿಯುತ್ತಿರುವ ಬೆಂಕಿಗೆ 
ಕಡಲ ತೀರದ ಗಾಳಿ ಬಿಸಿಯಾಗುತ್ತಿದೆ 
             **

ಗಿಜಿಗುಡುವ ಸಂತೆಯೊಳಗೆ 
ನೂರೆಂಟು ಮುಖಗಳು .. 
ಬಗೆಬಗೆ ಮುಖವಾಡಗಳು .. 
ಗಳಿಗೆಯಲಿ ಬದಲಾಗುವ ಬಣ್ಣಗಳು 
ಗುರುತಿನ ಹಂಗಿಲ್ಲದೆ ಬೆರೆತ
ಎಷ್ಟೊಂದು ಮಂದಿ 
ಬಿಕರಿಯ ತುದಿಯಲ್ಲಿ ಸಂಧಿಸುತ್ತವೆ 
ನಿರೀಕ್ಷೆ ನಿರಾಸೆಗಳು .. 

ತರಕಾರಿ ,ಮೀನು ,ಮಾಂಸ 
ಬಲೂನು ,ಬೆಂಡು ,ಬತ್ತಾಸು.. 
ಜಗಮಗಿಸುವ  ಫ್ಯಾನ್ಸಿ ಸ್ಟೋರು 
ನಡುವೆ ಡಿಸ್ಕೌಂಟಿನ ಆಫರು ..  
ಹಳೇ  ಮಾಲಿನ  ಹರಾಜಿನಂಗಡಿ
ಬಡವನ ಕಣ್ಣಲಿ ಕನಸಿನ ದಾಂಗುಡಿ 
ಗಲ್ಲಿಯೊಳಗಿನ ಮುರುಕು ಬಾರು 
ಹಗಲಿನಲ್ಲೇ  ಅರಳಿಕೊಂಡ 
ಸಂಜೆ ಮಲ್ಲಿಗೆಯ ಕಾರುಬಾರು 

ಎಲ್ಲವೂ ಮಾರಾಟಕ್ಕಿದೆ .. 
ಮಾರುತ್ತಿರುವವನಷ್ಟೇ ಅಲ್ಲ .. 
ಕೊಳ್ಳಬಂದವನೂ ಮಾರಿಕೊಂಡವನೇ 
ತೆರೆದ ಸಂತೆಯೊಳಗೆ ಏನುಂಟು ಏನಿಲ್ಲ 
ಬೆವರು,ಬೇಸರ, ನಲಿವು, ನೋವು ..   
ಆಸೆ ,ಮೋಸ , ನ್ಯಾಯ, ಅನ್ಯಾಯ.. 
ಸಂತೆಯೊಂದು ಪುಟ್ಟ ಜಗತ್ತು 
ಜಗತ್ತೊಂದು ದೊಡ್ಡ ಸಂತೆ.. 
ಅಪ್ಪನ ಕೈ ಹಿಡಿದು ನಡೆವ 
ಮಗುವಿನಲ್ಲಿ ಪ್ರಶ್ನೆಗಳ ಕಂತೆ .. 
ಬಿಡುವಿಲ್ಲದ ಅಪ್ಪನಿಗೆ ಕೊನೆಯಿಲ್ಲದ ಚಿಂತೆ .. 

ಮುಖವಾಡದ ಅಂಗಡಿಯ ಮುಂದೆ 
ಕೈ ಜಗ್ಗುವ ಮಗು.. 
ಗದರುವ ಅಪ್ಪನಿಗದು ವೃಥಾ ಖರ್ಚು 
ದಿನಕ್ಕೆಷ್ಟು ಬಾರಿ ಬದಲಿಸುತ್ತಾನೋ 
ತೆಗೆದು ತಳ್ಳಿದ ಉಸಿರಿನಂತೆ .. 
ಎಣಿಕೆಗೆ ದಕ್ಕದ ಲೆಕ್ಕ..
ಲೋಕವರಿಯದ ಮಗುವಿಗೆ 
ಬಣ್ಣ ಬೆಡಗಿನ  ಸೆಳೆತ ..  

ಮುಖವಾಡ ಬೇಕೆಂದು .. 
ಅಳುವ ಮಗುವಿಗೆ 
ಮುಂದೊಮ್ಮೆ,ತಾನೂ 
ಬಗೆಬಗೆ ಮುಖವಾಡ 
ತೊಡುತ್ತೇನೆಂದು ಗೊತ್ತಿಲ್ಲ​.. 
ಸುಮ್ಮನೆ  ಮುಂದೆ ಸಾಗುವ ಅಪ್ಪನಿಗೆ 
ತಾನು ಮಗುವಾಗಿದ್ದಾಗ
ತನ್ನಲ್ಲಿಯೂ  ಮುಖವಾಡ 
ಇರಲಿಲ್ಲವೆಂಬುದೀಗ   ನೆನಪಿಲ್ಲ  

Friday, May 9, 2014

ಜ್ಯೋತಿ ಸಿಂಗ್ ಸತ್ತು ತಿಂಗಳುಗಳು ಕಳೆದಿವೆ .ನಾವು ಭಾಗಶಃ ಅವಳನ್ನು ಮರೆತೇ ಬಿಟ್ಟಿದ್ದೇವೆ . ನಮಗೀಗ ಚರ್ಚೆಗೆ ಹೊಸ ವಿಷಯಗಳು ಸಿಕ್ಕಿವೆ. ಗಲ್ಲು ಶಿಕ್ಷೆ ಬೇಕೇ ಬೇಡವೇ ಎಂಬುವುದರಿಂದ ಹಿಡಿದು ಮೊನ್ನೆ ಮೊನ್ನೆ ನಡೆದ ಬಾಂಬ್  ದಾಳಿಯ ತನಕ ನಮಗೆ ಮಾತಾಡಲು ವಿಷಯಗಳಿಗೆ ಕೊರತೆ ಏನಿಲ್ಲ.  ಜ್ಯೋತಿ ಸಿಂಗ್ ಗೆ ಇಂಥಾ ಸಾವು ತಂದು ಕೊಟ್ಟ ದುರಾತ್ಮರು ಇನ್ನೂ ಜೈಲಿನೊಳಗಿದ್ದಾರೆ ,ಅವಳ ಕೇಸ್ ಇನ್ನೂ ನಡೀತಾ ಇದೆ ಅನ್ನೋದು ಬಿಟ್ಟರೆ ಬಹುತೇಕ ಎಲ್ಲ ಪ್ರತಿಭಟನೆಗಳೂ ತಣ್ಣಗಾಗಿವೆ. ಆದರೆ ಇನ್ನೂ ಭಾರತದಾದ್ಯಂತ ಈ ರೀತಿಯ ಅತ್ಯಚಾರಗಳೂ ಅನಾಚಾರಗಳೂ ನಡೆಯುತ್ತಲೇ ಇವೆ.ಕೆಲವು ಸುದ್ದಿಯಾಗುತ್ತಿವೆ , ಕೆಲವು ಇಲ್ಲ ಅಷ್ಟೇ. ಜ್ಯೋತಿ ಅತ್ಯಾಚಾರಕ್ಕೊಳಗಾಗಿ ಹಾಸಿಗೆ ಹಿಡಿದು ಮಲಗಿದ್ದಾಗ ಇದೇ ರೀತಿಯ ಬಹಳಷ್ಟು ಪ್ರಕರಣಗಳು ಸುದ್ದಿಪುಟಗಳಲ್ಲಿ ರಾರಾಜಿಸಿದವು,ವಿನೂತನ ಪ್ರತಿಭಟನೆಗಳೂ ನಡೆದವು ಆದರೆ ಏನಾದರೂ ಬದಲಾವಣೆ ಆಯಿತಾ ಅಂದರೆ ಖಂಡಿತಾ  ಇಲ್ಲ.ಆ ಸಮಯದಲ್ಲಿ ನಮ್ಮೆಲ್ಲರೆದೆಯೊಳಗೆ ಹೊತ್ತಿಕೊಂಡಿದ್ದ ಜ್ವಾಲೆ ನಿಧ ನಿಧಾನಕ್ಕೆ ಆರಿ ತಣ್ಣಗಾಗಿದೆ ಬಹುಷಃ  ಮತ್ತೊಂದು ಪ್ರಕರಣ ಭುಗಿಲೇಳುವ ತನಕ ನಾವೆಲ್ಲರೂ ಸುಮ್ಮನೆ ಇರುತ್ತೇವೆ.ಹಾಗಾದರೆ ಸದ್ದಿಲ್ಲದೇ ನಡೆಯುತ್ತಿರುವ ಈ ರೀತಿಯ ಅತ್ಯಾಚಾರ ಪ್ರಕರಣಗಳಿಗೆ ಕೊನೆ ಹೇಗೆ ? ಅಸಲು ಯಾವಾಗ ? ನಿಜಕ್ಕೂ ಇದಕ್ಕೆಲ್ಲ ಯಾರು ಕಾರಣ ಕರ್ತರು ?ಮೇಲ್ನೋಟಕ್ಕೆ ಸರಳವೆನಿಸುವ ಪ್ರಶ್ನೆ ನಿಜಕ್ಕೂ ಜಟಿಲ.


ಅಸಲೀ ಸಮಸ್ಯೆ ಏನು ?
 
ಇವತ್ತು ನಾವೆಲ್ಲಾ ಗಮನಿಸಿದಂತೆ ನಾವು ಹೆಣ್ಣು ಮಕ್ಕಳ ಕೂಗು ಇಷ್ಟೇ ...'ಗಂಡಸರೇ ನಮ್ಮನ್ನು ಭೋಗದ ವಸ್ತುಗಳಾಗಿ ನೋಡಬೇಡಿ ನಮ್ಮನ್ನೂ ನಿಮ್ಮಂತೆ ಈ ಭೂಮಿಯ ಸಕಲ ಸವಲತ್ತುಗಳನ್ನೂ ಅನುಭವಿಸಬಹುದಾದ ಜೀವಗಳು,ನಮಗೂ ಮನಸು ,ಆಸೆ ,ಅಭಿಪ್ರಾಯ ,ಕನಸು ,ಗುರಿ ಹೀಗೆ ಸಕಲವೂ ಇವೆ... ನಮ್ಮ ಬದುಕನ್ನು ನಮ್ಮಿಷ್ಟದಂತೆ ಬದುಕಲು ಕೊಡಿ .ಹೆಣ್ಣು ಮಕ್ಕಳ ಕುರಿತು ನಿಮಗಿರುವ ನಿಲುವನ್ನು ಬದಲಾಯಿಸಿಕೊಳ್ಳಿ. ಮುಕ್ತ ಬದುಕಿನ ಹಕ್ಕು ನಿಮ್ಮಷ್ಟೇ ನಮಗೂ ಇದೆ ಅನ್ನುವುದನ್ನ ನೆನಪಿಟ್ಟುಕೊಂಡು ನಮ್ಮನ್ನ ನಿಮಗಿಂತ ಒಂದು ಹಂತ ಕೆಳಗಿರಿಸಿ ನೋಡುವುದನ್ನ ಬಿಟ್ಟು ನಾವು ನಿಮ್ಮ ಸರಿ ಸಮಾನರೆಂದು ತಿಳಿದು ಸಹವರ್ತಿಗಳಂತೆ ನಡೆಸಿ ...... ಹೀಗೆ ....  

ಆದರೆ ನಾವು ಬಯಸುತ್ತಿರುವ ಈ ಬದಲಾವಣೆ ಇಂದು ನಾಳೆಗಳಲ್ಲಿ ಕೈಗೂಡುವುದೇ ? ಖಂಡಿತಾ ಇಲ್ಲ. ನಾವೆಷ್ಟೇ ಮುಂದುವರಿದಿದ್ದೇವೆ ಅಂದುಕೊಂಡರೂ ಬಹುತೇಕ ಗಂಡಸರು ಮನದಾಳದಲ್ಲಿ ಏನೇನೂ ಬದಲಾಗದೆ ಹಾಗೇ ಉಳಿದಿದ್ದಾರೆ. ತೀರ ಹೆಣ್ಣುಮಕ್ಕಳ ಹಕ್ಕಿನ ಕುರಿತು ,ಅವರ ಶೋಷಣೆಯ ವಿರುದ್ದ ದನಿಯೆತ್ತಿ ಬರೆಯುವ ಲೇಖಕ ಕೂಡ ತನ್ನ ಹೆಂಡತಿ ತನ್ನ ಕೈ ಕೆಳಗಿರಬೇಕೆಂದೇ ಬಯಸುತ್ತಾನೆ. ಎಷ್ಟೋ ಸಲ ಹೆಂಡತಿ ತನಗಿಂತ ಎಲ್ಲ ವಿಷಯಗಳಲ್ಲಿ ಮುಂದಿದ್ದರೂ ಗಂಡ ಮಾತ್ರ ಅವಳೇನಿದ್ದರೂ ತನ್ನ ಅಧೀನಳು ಅಂತ ಭಾವಿಸುತ್ತಾನೆ , ಹಾಗೆ ನಡೆಸಿಕೊಳ್ಳುತ್ತಾನೆ ಕೂಡ  ... ಇಲ್ಲಿ ಅವನಿಗೆ ತಾನು ಗಂಡಸು ಎಂಬ ಒಂದೇ ಒಂದು ಕ್ವಾಲಿಫಿಕೇಶನ್ನು ಸಾಕಾಗಿರುತ್ತದೆ.
ಇನ್ನು ತನ್ನ ಕೆಲಸಗಳನ್ನ ತಾನೆ ಮಾಡಿಕೊಳ್ಳುವ, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ , ಸುಂದರವಾಗಿ ಅಲಂಕರಿಸಿಕೊಂಡು ನಾಲ್ಕು ಜನರೊಡನೆ ಮುಕ್ತವಾಗಿ ಬೆರೆಯುವ ,ನೇರ ನಡೆ ನುಡಿಯ ,ಬೋಲ್ಡ್ ಅಂಡ್ ಔಟ್ ಗೋಯಿಂಗ್ ಹೆಣ್ಣೊಬ್ಬಳನ್ನ ಗಂಡಸು ತುಂಬಾ ಇಷ್ಟ ಪಡುತ್ತಾನೆ ಆದರೆ ಅದೇ ತನ್ನ ಹೆಂಡತಿಯೇ ಹಾಗಿದ್ದರೆ ಸಹಿಸಲಾರ.  ಯಾಕೆ ಹೀಗೆ ?
ಇದಕ್ಕೆಲ್ಲ ನಮ್ಮ ಪ್ರಸ್ತುತ ಬದುಕಿನ ಶೈಲಿ,ಸಂಪ್ರದಾಯಗಳು ಮತ್ತು ನಮ್ಮೆಲ್ಲರನ್ನೂ ಒಳಗೊಂಡ ಸಮಾಜವೇ ಕಾರಣ . 

ನೀವೆಲ್ಲ ಗಮನಿಸಿರಬಹುದು .. ಇನ್ನೂ ಬಹುತೇಕ ಮನೆಗಳಲ್ಲಿ ಗಂಡುಮಕ್ಕಳನ್ನೇ ಪ್ರಧಾನವಾಗಿ ನಡೆಸಲಾಗುತ್ತದೆ. ಚಿಕ್ಕಂದಿನಿಂದಲೇ ಅವನ ಈಗೋ ಪೋಷಣೆ ಪ್ರತ್ಯಕ್ಷವಾಗೋ ಪರೋಕ್ಷವಾಗೋ ನಡೆಯುತ್ತಿರುತ್ತದೆ . ಅಪ್ಪನ ಮಾತಿಗೆ ಬದಲು ಹೇಳದ ಅಮ್ಮ ,ತಾನು  ತಪ್ಪು ಮಾಡಿರದೆ ಇದ್ದರೂ ತಲೆ ಮೇಲೆ ಮೊಟಕಿಸಿ ಕೊಳ್ಳುವ ತಂಗಿ,ಅಡುಗೆ ಮನೆಯಲ್ಲಿ ಮನೆಕೆಲಸದಲ್ಲಿ ಅಮ್ಮನಿಗೆ ನೆರವಾಗುವ ಅಕ್ಕ,ಆಟ ಊಟ ಪಾಠ ಬಿಟ್ಟರೆ ಸುಮ್ಮನೆ ಕೂರುವ ತಾನು .. ಒಂದು ಮಗು ಚಿಕ್ಕಂದಿನಲ್ಲೇ ಈ ವ್ಯತ್ಯಾಸವನ್ನ ಗುರುತಿಸಿಬಿಡುತ್ತದೆ. ಆ ಹೂಮನಸಿನಲ್ಲೇ ಗಂಡು ಹೆಣ್ಣಿಗಿಂತ ಶ್ರೇಷ್ಠ ಎಂಬ ಭಾವನೆ ಮೆಲ್ಲಮೆಲ್ಲಗೆ ಬೆಳೆಯತೊಡಗುತ್ತದೆ.ಇತ್ತೀಚೆಗೊಮ್ಮೆ ಗೆಳೆಯರೊಬ್ಬರ ಮನೆಗೆ ಹೋಗಿದ್ದೆ ..ನಾ ಹೋದ ಸಮಯ ಗಂಡ ಹೆಂಡತಿ ಇಬ್ಬರೂ ಮನೆಯಲ್ಲಿರಲಿಲ್ಲ ಅವರ ಇಬ್ಬರು ಮಕ್ಕಳೂ ಅದಿನ್ನೂ ಶಾಲೆಯಿಂದ ಮನೆಗೆ ಬಂದಿದ್ದರು . ಇಬ್ಬರೂ ಅವಳಿ ಮಕ್ಕಳು . ಹುಡುಗ ಬಂದವನೇ ಸೋಫಾದ ಮೇಲೆ ಬ್ಯಾಗ್ ಎಸೆದು ಟಿ .ವಿ . ನೋಡುತ್ತಾ ಕುಳಿತಿದ್ದ, ಹುಡುಗಿ  ಕೈ ಕಾಲು ತೊಳೆದು ಕೊಂಡು ಇಬ್ಬರಿಗೂ ಹಾರ್ಲಿಕ್ಸ್ ಕಲಕಿ  ತಂದಿದ್ದಳು  ನಮ್ಮನ್ನು ನೋಡಿ 'ಬನ್ನಿ ಬನ್ನಿ 'ಅಂತ ಪ್ರೀತಿಯಿಂದ ಕರೆದು ಕೂರಿಸಿ ಟೀ ಮಾಡುತ್ತೀನಂತ ಹೊರಟಳು ನಾನು ತಡೆದೆ . ಹುಡುಗ ಮಾತ್ರ ಟಿವಿ ಯಿಂದ ಕಣ್ಣು ಕೀಳದೆ ಹಾಗೆ ಕುಳಿತಿದ್ದ . ನಂತರ ಹಾರ್ಲಿಕ್ಸ್ ಕುಡಿದು ಲೋಟ ಕೆಳಗಿಟ್ಟು ಮತ್ತೆ ಟಿವಿಯಲ್ಲಿ ಮಗ್ನನಾದ . ಹುಡುಗಿ ಅವನು ಕಳಚಿ ಬಿಸುಟಿದ್ದ ಸಾಕ್ಸ್ ,ಅವನು ಸೋಫಾ ಮೇಲೆ ಎಸೆದಿದ್ದ ಬ್ಯಾಗು ಎಲ್ಲವನ್ನೂ ಅವರ ರೂಮಿಗೊಯ್ದು ಓರಣವಾಗಿ ಇರಿಸಿ ಬಂದಳು. ತಡೆಯದೆ ನಾನು 'ಅಲ್ಲೋ ಪುಟ್ಟ, ಸ್ಕೂಲಿಂದ ಬಂಡ ತಕ್ಷಣ ನಿನ್ನ ಬ್ಯಾಗ್ ರೂಮಲ್ಲಿಟ್ಟು ಕೈ ಕಾಲು ತೊಳೆದುಕೋ ಬಾರದೇ ?' ಅಂತ ಕೇಳಿದೆ .ಹುಡುಗ ತನಗಲ್ಲವೇನೋ ಎಂಬಂತೆ ನನ್ನತ್ತ ನೋಡಲೇ ಇಲ್ಲ. ನಂತರ  ಗೆಳತಿಯಲ್ಲಿ ಈ ವಿಚಾರ ಶೇರ್ ಮಾಡಿದರೆ ಅವಳೂ ' ಗಂಡು ಮಕ್ಕಳಲ್ಲವೇನೆ ಅವರು ಇನ್ನ್ಹೇಗೆ ಇರ್ತಾರೆ ' ಅಂದಿದ್ದಳು .ಇಲ್ಲಿ ವಿಷಯ ಚಿಕ್ಕದ್ದು ನಿಜವೇ ಆದರೆ ಈ ರೀತಿಯ ಚಿಕ್ಕ ಚಿಕ್ಕ ವಿಷಯಗಳು ಮಕ್ಕಳ ಮನಸಲ್ಲಿ ತನ್ನದೇ ಆದ ಪ್ರಭಾವ ಬೀರದೇ ಇರುವುದಿಲ್ಲ. ಇನ್ನಿದು  ಒಂದು ಮನೆಯ ಕಥೆಯಲ್ಲ ಹುಡುಕಿದರೆ ಇನ್ನೂ ಅನೇಕ ಮನೆಗಳಲ್ಲಿ ಇಂಥದ್ದೇ ಅನೇಕ ಕಥೆಗಳು ಸಿಕ್ಕುತ್ತವೆ . ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಬಹಳಷ್ಟು ಬದಲಾವಣೆ ಆಗಿರುವುದು ನಿಜವೇ ಆದರೂ ಈ ಬದಲಾವಣೆ ಅನ್ನೋದೊಂದು  ಸ್ಲೋ ಪ್ರೋಸೆಸ್ ಹಾಗಾಗಿ ಇನ್ನೂ ಅನೇಕರಲ್ಲಿ ಪುರುಷ ಪ್ರಧಾನ  ಭಾವನೆ ಚಾಲ್ತಿಯಲ್ಲಿದೆ. ಸ್ವತಃ  ತಾಯಿಯೇ ಮಗಳನ್ನು ಮಾಡುವೆ ಮಾಡಿಸಿ ಕಳಿಸುವಾಗ ಗಂಡನಿಗೆ ತಗ್ಗಿ ಬಗ್ಗಿ ನಡೆಯುವಂತೆ ಕಿವಿಮಾತು ಹೇಳಿ ಕಳಿಸುತ್ತಾಳೆ .ಬದಲಿಗೆ ಇಬ್ಬರನ್ನೂ ಕೂರಿಸಿಕೊಂಡು ಪರಸ್ಪರರ ಆಸೆ ಆಕಾಂಕ್ಷೆಗಳಿಗೆ ಬೆಲೆ ಕೊಡಬೇಕೆಂದೂ ,ಒಬ್ಬರ ಮೇಲೊಬ್ಬರು ನಂಬಿಕೆ ಪ್ರೀತಿ ಮತ್ತು ಗೌರವ ಇರಿಸ ಬೇಕೆಂದೂ ,ಒಬ್ಬರ ಮನೆಯವರನ್ನು ಮತೊಬ್ಬರು ಪ್ರೀತಿಯಿಂದ ಗೌರವದಿಂದ ಕಾಣಬೇಕೆಂದು ಹೇಳಿಕೊಟ್ಟರೆ ಆಗದೆ..? 

ಗಂಡಸಿನ ಮನಸು ಹೇಗಿರುತ್ತದೆ?

ಒಬ್ಬ ಗಂಡಸು ನೋಡುವ ಮೊದಲ ಹೆಣ್ಣೆಂದರೆ ಅದು ತಾಯೇ . ಹೆಣ್ಣೊಬ್ಬಳ ಕುರಿತಾಗಿನ ಅಭಿಪ್ರಾಯಗಳು , ನಿರೀಕ್ಷೆಗಳು , ದೃಷ್ಟಿಕೋನ ಪ್ರತಿಯೊಂದೂ ಅಮ್ಮನ ಮೇಲೆ ಬಹಳಷ್ಟು ಪ್ರಮಾಣದಲ್ಲಿ ಡಿಪೆಂಡ್ ಆಗಿರುತ್ತದೆ. ಹಿಂದೊಮ್ಮೆ ಜ್ಯೋತಿಸಿಂಗ್ ಅತ್ಯಾಚಾರ ಪ್ರಕರಣ ಇನ್ನೂ ಬಿಸಿಯಾಗಿದ್ದ ಸಮಯದಲ್ಲಿ ಗಂಡಸರೇ ಹೆಣ್ಣುಮಕ್ಕಳನ್ನ ಕಾಮದ ಕಣ್ಣುಗಳಿಂದ ನೋಡಬೇಡಿ ,ಅವರನ್ನ ಗೌರವಿಸಿ ಅಂತೆಲ್ಲ ಬರೆದು ಫೇಸ್ ಬುಕ್ಕಿನಲ್ಲಿ ನಾನೊಂದು ಚಿಕ್ಕ ಸ್ಟೇಟಸ್ ಹಾಕಿದ್ದೆ ಅದಕ್ಕೆ ಪ್ರತಿಕ್ರಿಯಿಸಿದ ಹುಡುಗನೊಬ್ಬ ಹೆಣ್ಣು ಮಕ್ಕಳು ತಮ್ಮ ಉಡುಪಿನ ವಿಷಯದಲ್ಲೂ ಸ್ವಲ್ಪ ಗಮನ ಹರಿಸಬೇಕು ಅಂತ ಬರೆದಿದ್ದ ಅದಕ್ಕೆ ನಾನು ಸುಮ್ಮನಿರದೆ ಯಾಕೆ ಹಾಗಾದರೆ ಸೀರೆ ಉಡುವ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೇ ನಡೆದಿಲ್ಲವೇ ಅಂತ ಮರುಪ್ರಶ್ನೆ ಹಾಕಿದ್ದೆ. ಅದೆಲ್ಲ ಮುಗಿಯಿತು ಆದರೆ ಯೋಚಿಸುತ್ತ ಹೋದಂತೆ ಆ ಹುಡುಗ ಹೇಳೋ ಮಾತಿನಲ್ಲಿ ಅರ್ಥವಿಲ್ಲದೇ ಇಲ್ಲ ಅನಿಸಿದಂತೂ ನಿಜ. ಯಾಕೆಂದರೆ ನಮ್ಮದು ಭಾರತ ದೇಶ .ನಮ್ಮ ಸಂಸ್ಕೃತಿ ಪಾಶ್ಚಾತ್ಯರಂತೆ  ಮುಕ್ತವಾದ್ದಲ್ಲ ..ನಮಗೆ ನಮ್ಮದೇ ಆದ ಕಟ್ಟುಪಾಡುಗಳು ,ಸಂಪ್ರದಾಯಗಳು ,ವೇಷ ಭೂಷಣಗಳೂ ,ರೀತಿ ನೀತಿಗಳೂ ಇವೆ.ನಮ್ಮ ಶಿಕ್ಷಣ ಮಟ್ಟ ಹೆಚ್ಚಿದೆ ,ಸಂಸ್ಕೃತಿ ಸಂಪ್ರದಾಯಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ ,ಕಟ್ಟುಪಾಡುಗಳು ಸಡಿಲಗೊಂಡಿವೆ ,ಉಡುಗೆ ತೊಡುಗೆಗಳೂ ಬದಲಾಗಿವೆ ಆದರೂ ನಾವಿನ್ನೂ ಹೃದಯಾಂತರಾಳದಲ್ಲಿ ಬಹುಮಟ್ಟಿಗೆ ಭಾರತೀಯರಾಗೆ ಉಳಿದಿದ್ದೇವೆ . ಅದರಲ್ಲೂ ಗಂಡಸರು! 
ಹೆಣ್ಣುಮಕ್ಕಳು ಬಹಳ ಬೇಗನೆ ಬದಲಾವಣೆಗಳಿಗೆ ಒಗ್ಗಿ ಬಿಡುತ್ತಾರೆ . ಹೆಣ್ಣು ಮಗಳೊಬ್ಬಳು ಮದುವೆಯಾದ ನಂತರ ಎಷ್ಟು ಸೊಗಸಾಗಿ ಹೊಸ ಮನೆಗೆ ,ಹೊಸ ಜನರಿಗೆ ,ಹೊಸ ಜೀವನ ಶೈಲಿಗೆ ಹೊಂದಿಕೊಂಡು ಬಿಡುತ್ತಾಳೆ .. ಅದೇ ಒಬ್ಬ ಗಂಡಸನ್ನು ಮನೆ ಅಳಿಯನನ್ನಾಗಿ ಮಾಡಿನೋಡಿ .. ಅವನೊಳಗೆ ಸದಾ ಒಂದು ಚಡಪಡಿಕೆ ! ಅವನು ಸಂತೋಷವಾಗಿರಲಾರ .ಯಾಕೆಂದರೆ ಗಂಡಸು ಹೆಣ್ಣಿನಷ್ಟು ಬೇಗನೆ ಬದಲಾವಣೆಗಳಿಗೆ ಹೊಂದಿಕೊಳ್ಳಲಾರ . ಅದಕ್ಕಿಂತ ಹೆಚ್ಚಾಗಿ ಅವನಿಗೆ ಈ ಯಾವ ಬದಲಾವಣೆಗಳೂ ಬೇಕಿಲ್ಲ.  ಹೆಣ್ಣೆಂಬವಳು ಅವನ ಮಾತುಗಳಿಗೆ ತಲೆಯಾಡಿಸುತ್ತಾ ,ಅವನ ಪ್ರತಿಯೊಂದು ಬೇಕು ಬೇಡಗಳನ್ನ ಇಂಚೂ ತಪ್ಪದೆ ನಡೆಸಿಕೊಡುತ್ತಾ ,ಅವನ ಈಗೋವನ್ನ ತೃಪ್ತಿ ಪಡಿಸುತ್ತಾ ಇರುವುದಷ್ಟೇ ಅವನಿಗೆ ಬೇಕಾಗಿರುವಂಥದ್ದು . ಬದಲಾವಣೆ ಬೇಕಿದ್ದದು ನಮಗೆ ಹೆಣ್ಣುಮಕ್ಕಳಿಗೆ . ನಮ್ಮೊಳಗೆ  ಅವಕಾಶವಿಲ್ಲದೆ ಅಡಗಿ ಕುಳಿತಿದ್ದ ಪ್ರತಿಭೆಯನ್ನ ಹೊರತಂದು ನಮ್ಮಿಂದ ಎಲ್ಲವೂಸಾಧ್ಯ ಎಂದು ಜಗತ್ತಿಗೆ ತೋರಿಸಬೇಕಿತ್ತು ,ನಮ್ಮ ವ್ಯಕ್ತಿ ಸ್ವಾತಂತ್ರ್ಯವನ್ನ ಹಿಂಪಡೆಯಬೇಕಿತ್ತು ... ನಮಗೆ ನಿಜಕ್ಕೂ ಬದಲಾವಣೆ ಬೇಕಿತ್ತು .. ಅದಕ್ಕೇ  ಈ ಎಲ್ಲ ಬೆಳವಣಿಗೆಗಳಿಗೂ ಹೊಂದಿಕೊಳ್ಳುವುದು ನಮಗೆ ಸರಾಗವಾಯ್ತು. ಒಂದು ಕಾಲಕ್ಕೆ ಅಡುಗೆಮನೆಯಿಂದ ಮನೆಯಂಗಳದ ತನಕದ ಬದುಕನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಹೆಣ್ಣು ಮಗಳೀಗ ಬಾನಂಗಳಕ್ಕೆ ಹಾರಬಲ್ಲವಲಾಗಿದ್ದಾಳೆ ,ತಾನು ಏನೆಲ್ಲವನ್ನೂ ಸಾಧಿಸಬಲ್ಲೆ ಎಂಬುವುದನ್ನು ಬಲು ಕಡಿಮೆ ಅವಧಿಯಲ್ಲೇ ಸಾಧಿಸಿ ತೋರಿಸಿದ್ದಾಳೆ  ಆದರೆ ಗಂಡಸು ಈ ಬದಲಾವಣೆಗಳನ್ನ ನಮ್ಮಷ್ಟು ಸರಳವಾಗಿ ತೆಗೆದುಕೊಂಡಿಲ್ಲ .. ಅವನು ಸುಮ್ಮನೆ ಒಪ್ಪಿಕೊಂಡಂತೆ ಬದುಕುತ್ತಿದ್ದಾನೆ . ಅವನೊಳಗಿನ ಗಂಡಸಿನ ಎದೆಯಲ್ಲಿ ಸಣ್ಣ ಭಯ. ಎಂದಾದರೊಮ್ಮೆ ಅವಕಾಶವಾದಾಗ ಅವನೊಳಗಿನ ರಾಕ್ಷಸ ಹೊರಬಂದುಬಿಡುತ್ತಾನೆ .  ಅದರಿಂದಲೇ ಇಂದಿಗೂ ನಮ್ಮಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ಎಲ್ಲೆಯೇ ಇಲ್ಲದೆ ನಡೆಯುತ್ತಲೇ ಇವೆ. 

ಬಾಹ್ಯ ಪ್ರಚೋದಕಗಳು 

ಗಂಡಸಿನ ಮನಸನ್ನ ಪ್ರಭಾವಕ್ಕೊಳಪಡಿಸಲು ಒಂದಲ್ಲ ಹಲವಾರು ವಿಷಯಗಳಿವೆ . ತನ್ನೊಳಗಿನ ಆಂತರಿಕ ತುಮುಲಗಳಿಂದಾಗಿ ತಪ್ಪೆಸಗುವ ವರ್ಗ ಒಂದೆಡೆಯಾದರೆ ಹೀಗೆ ಸಿನಿಮಾ ,ಅಂತರ್ಜಾಲ ಮತ್ತಿತ್ತರ ಮಾಧ್ಯಮಗಳಿಂದಾಗಿ ಪ್ರಚೋದನೆಗೆ ಒಳಪಟ್ಟು ತಪ್ಪು ಮಾಡುವವರೂ ಇಲ್ಲದಿಲ್ಲ.
ಉದಾಹರಣೆಗೆ,ಇತ್ತೀಚಿನ ಸಿನಿಮಾಗಳಲ್ಲಿ ಕಡ್ದಾಯವೇನೋ ಎಂದೆನಿಸುವ ಐಟಂ ಹಾಡುಗಳನ್ನ ತೆಗೆದುಕೊಳ್ಳಿ ,ಅವು  ಅಷ್ಟೊಂದು ಪ್ರಚೋದನಾತ್ಮಕವಾಗಿರುತ್ತವೆ .ಆ ಹಾವಭಾವ ಭಂಗಿ ಗಳನ್ನ ನೋಡಿದ ಎಂಥವನ ಮೈಯೂ ಒಂದು ಕ್ಷಣ ಬೆಚ್ಚಗಾಗದೇ ಇರದು. ಅಂಥಾ ಉನ್ಮಾದಕರ ಹಾಡು,  ವಿಡಿಯೋಗಳನ್ನ ನೋಡಿ ಹೊರ ಬರುವವನ ಕೈಗೆ ಅಲ್ಲಿ ಕುಣಿದ ಸುಂದರಿಯಂತೂ ಸಿಗಲಾರಳು ಆದರೆ ಯಾರೋ ಅಮಾಯಕಿ ಸಕಾಲದಲ್ಲಿ ಸಿಕ್ಕಿಬಿಟ್ಟರೆ ಅವನು ರಾಕ್ಷಸನಾಗಿ ಬಿಡುತ್ತಾನೆ . ಇನ್ನು ಅಲ್ಲಿ ಹಾಗೆ ಕುಣಿಯುವವರಾದರೂ ಹುಡುಗಿಯರೇ .... ಎಷ್ಟೋ ಸಲ ತಮ್ಮನ್ನು ಇಲ್ಲಿ ಕೇವಲ ಕಾಮಪ್ರಚೋದಕದಂತೆ ಬಳಸಲಾಗುತ್ತಿದೆ ಅಂತ ತಿಳಿದೂ ಅವರು ಇದಕ್ಕೆ ಒಪ್ಪಿಕೊಂಡಿರುತ್ತಾರೆ .ಬಹಳಷ್ಟು ಸಲ ಅಂತ ಹಾಡುಗಳು ಆ ಸಿನಿಮಾ ಕಥೆಗೆ ಬೇಕಾಗಿಯೇ ಇರುವುದಿಲ್ಲ ಆದರೆ ಸಿನಿಮಾ ಓಡಲು ,ಜನರನ್ನ ಸೆಳೆಯಲು ಇಂಥ ಹಾಡುಗಳ ಅವಶ್ಯಕತೆ ಇದೆ ಅನ್ನುವ ಒಂದು ನಂಬಿಕೆ ಹೀಗೆಲ್ಲ ಮಾಡಿಸುತ್ತದೆ. ಹಾಗಿದ್ದರೂ ಯಾಕೆ ಇಂಥವೆಲ್ಲ ಚಾಲ್ತಿಯಲ್ಲಿವೆ  ಅಂತೇನಾದರೂ ಯೋಚಿಸಿದರೆ ಇಲ್ಲಿ ಮುಖ್ಯವಾಗಿ ಕಾಣಬರುವುದು ಹಣ. ಯಾವಾಗ ಬೇಕಾದರೂ ಮುಗಿದು ಹೋಗಬಹುದಾದ ಈ ಬದುಕಿನಲ್ಲಿ ಇರುವಷ್ಟು ದಿನ ಚೆನ್ನಾಗಿ ಶ್ರೀಮಂತರಾಗಿ ಎಂಜಾಯ್ ಮಾಡಬೇಕೆಂಬ ಆಸೆಯೇ ಇಂಥದ್ದನೆಲ್ಲ ಮಾಡಿಸುತ್ತದೆ . ಹಣಗಳಿಸುವ ಹೆಸರು ಮಾಡುವ ಹಂಬಲ ಹುಚ್ಚಿನಂತೆ ತಲೆಗೇರಿದೆ. ಅದಕ್ಕಿಂತ ಹೆಚ್ಚಾಗಿ  ನಮ್ಮಲ್ಲಿ ತಾಳ್ಮೆ ತುಂಬಾ ಕಡಿಮೆಯಾಗಿ ಬಿಟ್ಟಿದೆ . ಯಾವೊಂದನ್ನೂ ಕಾಯ್ದು ಪಡೆದುಕೊಳ್ಳುವುದರಲ್ಲಿನ ಸೊಗಸು ಅರ್ಥ ಕಳಕೊಂಡಿದೆ . ಎಲ್ಲವೂ ತಕ್ಷಣಕ್ಕೆ ದೊರಕಿಬಿಡಬೇಕೆಂಬ ದುರಾಸೆ... ! 
ಅದಲ್ಲದೆ ಇಂಥ ಐಟಂ ಹಾಡುಗಳು , ಸಿನಿಮಾದಲ್ಲಿ ಧಾರಾಳವಾಗಿ ತೋರಿಸಲ್ಪಡುವ ಬೆಡ್ ರೂಂ ಸೀನುಗಳು ,ಇಂಟರ್ನೆಟ್ಟಿನಲ್ಲಿ ಲಭ್ಯವಿರುವ ಅನೇಕಾನೇಕ ಸೆಕ್ಸ್ ವಿಡಿಯೋಗಳು,ಮನುಷ್ಯ ಹಂತ ಹಂತವಾಗಿ ಕಳೆದುಕೊಳ್ಳುತ್ತಲೇ ಬರುತ್ತಿರುವ ಪಾಪಭೀತಿ, ಅಪರಿಮಿತ ಸ್ವಾರ್ಥ, ಈಗಿಂದೀಗಲೇ ಎಲ್ಲವನ್ನೂ ಪಡೆದು ಬಿಡಬೇಕೆಂಬ ಅವಸರ  ಇವೆ ಮುಂತಾದ ಕಾರಣಗಳಿಂದಲೇ ಇಂದು ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿರುವುದು.  ಹಾಗಂತ ಪ್ರತಿಯೊಬ್ಬರೂ ಈ ಎಲ್ಲವುಗಳಿಂದ ಪ್ರಭಾವಕ್ಕೊಳಗಾಗಿ ಬಿಡುತ್ತಾರೆ ಅಂತಲ್ಲ  ಆದರೆ ಈ ಬಗೆಯ ಬಾಹ್ಯ ಪ್ರಚೋದನೆಗಳಿಂದ ಕುದಿವ ಮನಸನ್ನು ಎಲ್ಲರಿಂದಲೂ ಹತೋಟಿಗೆ ತಂದು ಕೊಳ್ಳಲು ಸಾಧ್ಯವಾಗುವುದಿಲ್ಲ . ಹಾಗೊಮ್ಮೆ ಮನದಾಳದಲ್ಲಿ ತನ್ನೆಲ್ಲ ವಾಂಛೆಗಳನ್ನು ಅಡಗಿಸಿಕೊಂಡು ಸಭ್ಯನಂತೆ ಬದುಕುತ್ತಿರುವವನು ಕೂಡ ಒಂದೊಮ್ಮೆ ಅವಕಾಶ ಸಿಕ್ಕರೆ ವಿಕೃತನಾಗಿ ಬದಲಾಗಿ ಬಿಡುವುದರಲ್ಲೂ ಸಂದೇಹವಿಲ್ಲ .ಇನ್ನು ಅವಕಾಶಕ್ಕಾಗಿ ಅರಸುತ್ತಿರುವವನಿಗೆ ಕೈಗೆ ಸಿಕ್ಕಿರುವುದು ಮಗುವೋ ,ಮುದುಕಿಯೋ ಅನ್ನುವ ವಿವೇಚನೆ ಕೂಡ ಇಲ್ಲವಾಗಿ ಅವನು ಕಾಮಾಂಧನಾಗುತ್ತಾನೆ. ಕೆಲವರು ಇದನ್ನ ಮೃಗೀಯ ವರ್ತನೆ ಅನ್ನುತ್ತಾರೆ ಆದರೆ ಅದು ತಪ್ಪು .ಯಾವುದೇ ಮೃಗ ಮತ್ತೊಂದು ಮೃಗದ ಮೇಲೆ ಅತ್ಯಾಚಾರ ಮಾಡುವುದಿಲ್ಲ .ಸಂಗಾತಿಯನ್ನ ಒಲಿಸಿಕೊಂಡ ನಂತರವಷ್ಟೇ ಅಲ್ಲಿ ಮಿಲನ ಸಾಂಗತ್ಯ ನಡೆಯುತ್ತದೆ . ಅದೂ ಕೂಡ ಸಂತಾನೋತ್ಪತ್ತಿಯ ಸಲುವಾಗಿ ಮಾತ್ರ . ಆದರೆ  ಮಿಲನದಲ್ಲಿನ ಸಂತೋಷವನ್ನ ಕಂಡುಕೊಂಡು ಅದನ್ನೊಂದು ಮನರಂಜನೆಗೆಂಬಂತೆ ಬಳಸುವವನು ಕೇವಲ ಮನುಷ್ಯ . ಅತ್ಯಾಚಾರ ಎಸಗುತ್ತಿರುವವರು ಬುದ್ದಿ ಇಲ್ಲ ಅಂದುಕೊಂಡಿರೋ ಪ್ರಾಣಿಗಳಲ್ಲ ಬದಲಾಗಿ ನಾಗರಿಕನೆಂದು ಗುರುತಿಸಿಕೊಳ್ಳುತ್ತಿರುವ ಮನುಷ್ಯ . 

ಸಧ್ಯ ಇದಕ್ಕೆಲ್ಲ ಪರಿಹಾರ ಹೇಗೆ ..?

ಬದಲಾವಣೆಯೆಂಬುವುದು ಕೇವಲ ಒಂದೆರಡು ದಿನಗಳಲ್ಲಿ ನಡೆಯಬಹುದಾದ ಪ್ರಕ್ರಿಯೆಯಂತೂ ಅಲ್ಲ. ಅದಕ್ಕೆ ಅದರದ್ದೇ ಆದ ಸಮಯಾವಕಾಶ ಬೇಕಾಗುತ್ತದೆ. ಸಧ್ಯ ಅಂಥ ಬದಲಾವಣೆ ಅವರವರ ಮನೆಗಳಲ್ಲಿ ತೊಡಗಿ ಹಾಗೆ ಇಡೀ ಸಮುದಾಯವನ್ನು ಆವರಿಸಬೇಕಾಗಿದೆ.ಮೊದಲಿಗೆ ಮನೆಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರನ್ನೂ ಸರಿ ಸಮಾನರಾಗಿ ಬೆಳೆಸಬೇಕಾಗುತ್ತದೆ . ಹೆಣ್ಣು ಮಕ್ಕಳೆಡೆಗೆ ಗೌರವವನ್ನೂ ಆದರವನ್ನೂ ಬೆಳೆಸಿಕೊಳ್ಳುವಂತೆ ನೋಡಿಕೊಳ್ಳಬೇಕಾಗುತ್ತದೆ .ಮನೆಯ ಚಿಕ್ಕ ಪುಟ್ಟ ಕೆಲಸಗಳಲ್ಲಿ ನೆರವಾಗಬೇಕದಂತಹ ಸಂಧರ್ಭ ಬಂದಾಗ ಹೆಣ್ಣು ಗಂದುಮಕ್ಕಳಿಬ್ಬರನ್ನೂ ಅದರಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು. ಅದಲ್ಲದೆ ಮುಚ್ಚು ಮರೆ ಮಾಡಿಟ್ಟಷ್ಟೂ ಯಾವೊಂದು ವಿಚಾರವೂ ಕುತೂಹಲ ಕೆರಳಿಸುತ್ತದೆ ಅನ್ನುವುದನ್ನು ಮನಗಂಡು ಶಾಲಾ ಮಟ್ಟದಿಂದಲೇ ಅಗತ್ಯ ಲೈಂಗಿಕ ಶಿಕ್ಷಣ ವನ್ನು ನೀಡಬೇಕಾಗುತ್ತದೆ ಮತ್ತು ಅದೇ ಸಮಯದಲ್ಲಿ ಸ್ವಯಂ ಶಿಸ್ತನ್ನು ಜೀವನದ ಪ್ರತಿಯೊಂದು ಪರ್ವದಲ್ಲೂ ಪರಿಪಾಲಿಸುವ ಕುರಿತು ತಿಳುವಳಿಕೆ ಮೂಡಿಸಬೇಕಿದೆ. ಮುಖ್ಯ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಗೆ ಅಗತ್ಯವಾದ ಕರಾಟೆ ಮತ್ತಿತ್ತರ ಕಸರತ್ತುಗಳನ್ನು ಶಾಲೆಯಲ್ಲೇ ಕಡ್ಡಾಯವಾಗಿ ಕಲಿಸಿಕೊಡಬೇಕಿದೆ. ಮಕ್ಕಳೇನಾದರೂ ತಪ್ಪು ಮಾಡಿದರೆ ಪ್ರೀತಿಯ ಪರವಶತೆಯಲ್ಲಿ ಪೋಷಕರು ಅಂಧರಂತೆ ಮಕ್ಕಳ ಪರ ವಾದಿಸುವುದುಂಟು ಆದರೆ ಅದು ತಪ್ಪು. ಹಾಗೆ ತಪ್ಪು ಮಾಡಿದ ಮಗುವಿನ ಜೊತೆಗೆ ನಿಲ್ಲ ಬೇಕು ನಿಜವೇ ಆದರೆ ಆತನ ತಪ್ಪಿನ ಜೊತೆ ನಿಲ್ಲಬಾರದು.ಅವರಿಗೆ ತನ್ನ ತಪ್ಪಿನ ಪರಿಣಾಮಗಳನ್ನ ಅರ್ಥ ಮಾಡಿಸುವುದರ ಜೊತೆಗೆ ತನ್ನ ತಪ್ಪುಗಳಿಗೆ ತಾನು ಎಷ್ಟರ ಮಟ್ಟಿಗೆ ಜವಾಬ್ದಾರನಾಗಿರುತ್ತೇನೆ ಎಂಬುವುದನ್ನೂ ಮನಗಾಣಿಸಬೇಕು. ಹೇಗೆ ಸರಿ ಸಮಾನರೆಂದುಕೊಂಡರೂ ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರೂ  ತಮ್ಮ ನಡುವೆ ಅಗತ್ಯ ಅಂತರವನ್ನ ಕಾಯ್ದುಕೊಳ್ಳುವುದು ಕ್ಷೇಮ. ಇದರಿಂದ ಅನಗತ್ಯ ತೊಂದರೆಗಳನ್ನ ತಪ್ಪಿಸಬಹುದು . ಇನ್ನು ಮನೆಯಲ್ಲಿ ಪೋಷಕರು ಮಕ್ಕಳು ಯಾವೆಲ್ಲ ಬಗೆಯ ಅಂತರ್ಜಾಲ ತಾಣಗಳನ್ನ ಹೆಚ್ಚಾಗಿ ನೋಡುತ್ತಾರೆ ಅನ್ನುವುದನ್ನ ಸೂಕ್ಷ್ಮವಾಗಿ ಗಮನಿಸುತ್ತಿರಬೇಕು , ಅಗತ್ಯವಿಲ್ಲದ ಸೆಕ್ಸ್ ವೆಬ್ ಗಳನ್ನ, ಹಿಂಸಾತ್ಮಕ ವಿಡಿಯೋ ತಾಣಗಳನ್ನ  ಬ್ಲಾಕ್ ಮಾಡಿದರೆ ಒಳ್ಳೆಯದು.
ಮುಖ್ಯವಾಗಿ ಪೋಷಕರು ಪರಸ್ಪರ ಪ್ರೀತಿ ಗೌರವ ವನ್ನ ತೋರಿಸಿಕೊಳ್ಳುತ್ತಾ ಮಾದರಿಯಾಗಿ ಇದ್ದರೆ ಮಕ್ಕಳ ಮನಸಿನ ಮೇಲೆ ಉತ್ತಮ ಪರಿಣಾಮ ಉಂಟಾಗುತ್ತದೆ . ಸಧ್ಯಕ್ಕಂತೂ ಯಾವುದೂ ಬದಲಾಗುವುದಿಲ್ಲ ಆದರೆ ನಿಧಾನಕ್ಕೆ ನಮ್ಮ ಮಕ್ಕ ಮಕ್ಕಳ ಕಾಲಕ್ಕಂತೂ ಖಂಡಿತಾ ಒಂದು ಒಳ್ಳೆಯ ಬದಲಾವನೆ ಕಾಣ ಬಹುದು.  ಯಾಕೆಂದರೆ ಮಕ್ಕಳ ಮನಸಲ್ಲಿ ಅಮ್ಮನ ಕುರಿತಾದ ಕಾನ್ಸೆಪ್ಟ್ ಬದಲಾಗುತ್ತಿದೆ.ಈಗ ಅಮ್ಮ ಮನೆಯ ಹೊರಗೂ ಒಳಗೂ ಸಮನಾಗಿ ಕೆಲಸ ಮಾಡುತ್ತಾಳೆ ,ಆಧುನಿಕ ಚಿಂತನೆ ಉಳ್ಳವಳೂ ,ಆಧುನಿಕ ವಸ್ತ್ರ ಧರಿಸುವವಳೂ,ಧೈರ್ಯವಂತೆಯೂ ,ವಿಚಾರವಂತೆಯೂ  ಆಗಿದ್ದಾಳೆ . ಅಪ್ಪ ತನ್ನ ಅಭಿಮಾನ ಬಿಟ್ಟುಕೊಟ್ಟು ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವುದನ್ನೂ ,ಅಮ್ಮನ ಹಾಗೆ ಅವನೂ ತನ್ನನ್ನು ಮುಚ್ಚಟೆ ಮಾಡುವುದನ್ನು  ಮಗು ನೋಡುತ್ತದೆ . ಅಪ್ಪ ಅಮ್ಮ ಇಬ್ಬರೂ ಹೇಗೆ ಒಬ್ಬರನೊಬ್ಬರು ಕಾಂಪ್ಲಿಮೆಂಟ್ ಮಾಡಿಕೊಳ್ಳುತ್ತಾರೆ ಅನ್ನುವ ವಿಚಾರ ಮಗುವಿನ ಮನಸನ್ನು ಆಳವಾಗಿ ತಟ್ಟುತ್ತದೆ .  ಅಪ್ಪ ,ಅಮ್ಮ ಇಬ್ಬರಲ್ಲೂ ಸಮಾನತೆ ಕಾಣುವ ಮಗುವಿಗೆ ಮುಂದಿನ ದಿನಗಳಲ್ಲಿ ತನ್ನ ಒಡಹುಟ್ಟಿದ ಅಕ್ಕತಂಗಿಯರನ್ನು ಜೊತೆಗಾರರನ್ನು ,ಗೆಳತಿಯರನ್ನು ತನ್ನಂತೆ ನೋಡುವುದರಲ್ಲಿ ಯಾವುದೇ ಕಷ್ಟ ಅನಿಸುವುದಿಲ್ಲ. 
ಈಗಾಗಲೇ ಬಹಳಷ್ಟು ಸುಧಾರಣೆ ಆಗಿದೆಯಾದರೂ ಇದು ಸಾಲದು . ಹೆಣ್ಣಿಗೆ ಸಮನಾದ ಅಧಿಕಾರ, ಹಕ್ಕು,  ಸ್ವಾತಂತ್ರ್ಯ ಎಲ್ಲವೂ ಇದ್ದರೂ ಸಧ್ಯಕ್ಕಂತೂ ಅದಕ್ಕೆಲ್ಲ ಸರಿಯಾದ ಅಂಗೀಕಾರ ದೊರೆತಂತಿಲ್ಲ ಆದರೆ  ಒಂದು ಮಾದರಿ ಸಮಾಜವನ್ನ ಮುಂದಿನ ದಿನಗಳಲ್ಲಿ ನಾವು ನಿರೀಕ್ಷಿಸಬಹುದೆಂಬ ಆಶಾವಾದವಂತೂ ನನ್ನೊಳಗಿದೆ . ನಾವೆಲ್ಲರೂ ಹಾಗೊಂದು ಸುಧಾರಣೆ ತರುವತ್ತ ಗಮನ ಹರಿಸೋಣ . 
                                           
                                                      ****************************


ನಿಶಬ್ದ ರಾತ್ರಿಗಳಲಿ..
ನಿನ್ನ ನಿಟ್ಟುಸಿರ ಸದ್ದು 
ತಾಕುತ್ತದೆ..
ಕಿವಿಯಂಚಲಿ ನವಿರು ಚಳಿ 
ಬೆಚ್ಚನೆಯ ಕಣ್ಣೀರು..
ಜಾರುತ್ತದೆ..ನನ್ನ ಕೆನ್ನೆಗುಂಟ ..

ಎದೆಯೊಳಗಿನ  ಮಂಜುಗಡ್ಡೆ 
ಕರಗುವ ಸಮಯ...
ಕಿಟಕಿಯಲಿ ತೂಗು ಬಿದ್ದ ಚಂದ್ರ..
ತಣ್ಣಗೆ ನೋಡುತ್ತಾನೆ...
ಎಲ್ಲ ತಿಳಿದವನಂತೆ....
ಗರಿಯಲುಗಿಸಿ ನಗುವ ತೆಂಗಿನ ಮರದ..
ಹೂ ಹೀಚಿಗೂ ಗೊತ್ತು..
ನಾನು ಅಳುತ್ತಿದ್ದೇನೆ..

ಸುಮ್ಮ್ಮ ಸುಮ್ಮನೆ ಕಣ್ಮುಂದೆ ಸುಳಿಯುತ್ತವೆ..
ನೀಲಿ ಹಕ್ಕಿಯ ಚಿತ್ರ 
ಹೂ ಬಿಟ್ಟ ರೆಂಜೆ ಮರದಡಿ ನಾನು_ನೀನು..
ಮಾಲಿನಿ ನದಿಯ ಜೊಂಡು ಪೊದೆ..
ಆರಿಸಿ ತಂದ ನುಣುಪು ಕಲ್ಲು...
ಹೊಳೆದ ನನ್ನ ಗಲ್ಲದಲ್ಲಿ..
ಇಳಿದ ನಿನ್ನ ಹಲ್ಲು...

ಮಿಂಚು ಹುಳು ಕಣ್ಣು ಮಿಟುಕಿಸುತ್ತದೆ ..
ಗೊಡೆಯಲ್ಲಿನ ಹಲ್ಲಿ ಲೊಚಗುಟ್ಟುತ್ತದೆ 
ಟಿಕ್ ಟಿಕ್.. ಟಿಕ್...
ಗಡಿಯಾರವೂ ತುಸು ಮೆಲ್ಲಗೆ ಚಲಿಸುತ್ತಿದೆ...
ಸಮಯ ಚಲಿಸದಂತೆ ಭಾರವಾಗಿದೆ..

ಇಳಿಬಿದ್ದ ತೂಗುದೀಪದ ಕೆಳಗೆ..
ಅದೇ ಹಳೆಯ ಮಂಚ..
ಹೊರಳಿ ತಬ್ಬಿಕೊಂಡರೆ..
ಕೈ ತುಂಬುವ ಖಾಲಿ ಜಾಗ..
ನಡುಗುವ ಬೆರಳುಗಳಿಗೆ ತಗಲುತ್ತವೆ..
ಅಲ್ಲಲ್ಲಿ ಚೆಲ್ಲಿದ ನಿನ್ನ ನೆನಪುಗಳು..

ಉಕ್ಕಿರಿ ಬಿಕ್ಕಿರಿ ಉಸಿರು.
ತಪಿಸುವ ಮನಸಿನ ತುಂಬಾ..
ದುಃಖ ಕಾರ್ಮುಗಿಲು..


ಇಲ್ಲಿ ಎಲ್ಲ ಹಾಗೇ ಇವೆ...
ಕೇವಲ ನಿನ್ನ ಹೊರತು..
ಕೇವಲ ನನ್ನ ಹೊರತು.
ಗೆಳೆಯಾ 
ನೀ ಹೋಗಿ ಅದೆಷ್ಟು ದಿನಗಳಾದವೋ.....
ನಾ ಲೆಕ್ಕ ಕೂಡ ಇಟ್ಟಿಲ್ಲ...
ಆದರೆ ನನಗೇನೋ
ನೀ ಇಲ್ಲೇ ಎಲ್ಲೋ ಇರುವೆಯೇನೋ
ಎಂದು ಭ್ರಮೆಯಾಗಿದೆ...
ಕಣ್ಣೆದುರಲ್ಲಿ ನೀನಿರದಿದ್ದರೂ
ನಿನ್ನ ಬಿಸಿಯುಸಿರು ನನ್ನ ತಾಕುತ್ತಿದೆ..
ಕೊನೆಯದಾಗಿ ನೀ ಒತ್ತಿ ಹೋದ
ಮುತ್ತಿನಲ್ಲಿ  ಇನ್ನೂ ನಿನ್ನ ತುಟಿಯ ತೇವವಿದೆ...
ನನ್ನ ಮುಡಿಯಲ್ಲಿ ಮಲಗಿದ್ದ ಮಲ್ಲಿಗೆ
ಬಾಡಿದ್ದರೂ...
ಅದರ ಘಮಲು ಅಮಲು ಹಾಗೇ ಇದೆ...
ಅಂದು ನಾ  ಕಳಚಿಟ್ಟ 
ಕಾಲ್ಗೆಜ್ಜೆ ..
ಮಾತು ಮರೆತು ಕುಳಿತಿದೆ...
ಬಿಚ್ಚಿಟ್ಟ ಬಳೆಗಳು ನಾಚಿಕೊಂಡು
ಮೌನವಾಗಿವೆ..
ಹಾಸಿಗೆಯ ಮುದುರಿನಲ್ಲಿ 
ನಿನ್ನ ಮೈಬಿಸುಪಿನ್ನೂಆರದೆ ಉಳಿದಿದೆ...
ನೀ ನುಡಿಸಿಟ್ಟ ವೀಣೆ ಕೂಡಾ.....
ಇನ್ನೂ
ನಿನ್ನ ನೆನಪಿನಲ್ಲಿ ಕಂಪಿಸುತ್ತಿದೆ....
ನೀ ಕುಡಿದಿಟ್ಟ ಮಧು ಬಟ್ಟಲಿನಲ್ಲಿನ್ನೂ
ನಿನ್ನ ತುಟಿಯಂಚಿನ ದಾಹವಿದೆ..
ಎಲ್ಲಕ್ಕಿಂತ ಗೆಳೆಯಾ .....
ನೀ ಮನಸಿಗೆ  ಮಾಡಿ ಹೋದ ಗಾಯ..
ಒಂದಿಷ್ಟೂ ಆರದೆ ಹಸಿಯಾಗಿದೆ...
ಉಳಿಸಿ ಹೋದ ನೆನಪಂತೂ.....
ಮರೆತು ಕೂಡ ಮರೆಯದಂತೆ..
ಹಠ ಹೂಡಿದೆ...
ಇನ್ನುನನ್ನಿಂದಿನ್ನಾಗದು....
ಹೇ... 
ಬಂದುಬಿಡು ಗೆಳೆಯಾ..
ಹೊಸಲ ಮೇಲಿನ ಹಣತೆ..
ಹೇಳದೆ ಉಳಿದ ಕವಿತೆ...
ಎಂದೂ ಬತ್ತದ ನನ್ನೊಲವಿನೊರತೆ..
ನಿನ್ನದೇ ದಾರಿ ಕಾಯುತ್ತಿವೆ..
ಬಂದುಬಿಡೋ ...
ಹಸಿ ಸೌದೆ ನೀನು.
ಎಷ್ಟು ಹೊತ್ತಿಸಿದರೂ 
ಹತ್ತಿಕೊಳ್ಳದೆ ನಿಡುಸುಯ್ಯುತ್ತಿರುವೆ ...
ತಿಕ್ಕಿ ತೀಡಿ ಊದಿ ಒದರಿ..
ಓಲೈಸಿ....ಉಹೂಂ..
ನೀ ಉರಿಯದೆ ಸುಮ್ಮನಿರುವೆ..

ಬೂದಿಮುಚ್ಚಿದ ಕೆಂಡ ನಾನು 
ಒಳಗೆ ಬಯಕೆ ಬೇಗೆ..
ಮೇಲೆ ನಿರ್ಬಲ ಪರದೆ..
ಗಾಳಿಯೊಂದು ನೆಪ...
ನನಗೋ ಉರಿದು ಧಗಧಗಿಸುವ ತವಕ ..
ನೀ ಉರಿಯಲೊಪ್ಪದೆ ಸುಮ್ಮನಿರುವೆ..

ಭಯ ನಿನಗೆ...
ನನ್ನೊಳಗೊಂದಾಗಿ..ಉರಿದು ಬೂದಿಯಾಗಿ..
ಅಸ್ತಿತ್ವವೇ ಕಳೆದುಹೊಗುವುದೇನೋ 
ಎಂಬ ತಲ್ಲಣ..!
ಅದಕೇ ಇರಬೇಕು..
ನೀ ಚಿಟಿ ಚಿಟಿ ಚಡಪಡಿಸುತ್ತಿರುವೆ ..

ನನಗೂ ಭಯ..
ಎಲ್ಲಿ ನಿನಗಾಗಿ ಕಾದು ಕಾದು..
ಕಡೆಗೊಮ್ಮೆ ಆರಿ ತಣ್ಣಗಾಗಿ 
ಬರಿಯ
ಇದ್ದಿಲಾಗಿ ಬಿಡುವೆನೋ ಎಂಬ ದಿಗಿಲು..
ನಾನೂ ತಳಮಳಿಸುತ್ತಿರುವೆ....

ಬಾ ನಲ್ಲ..
ಎಲ್ಲ ಮರೆತು ... 
ನೀ ನನ್ನೊಳಾಗಿ, ನಾ ನಿನ್ನೊಳಾಗಿ
ಇಬ್ಬರೊಂದಾಗಿ..
ಕೇವಲ ಒಂದೇ ಆಗಿ ..
ಬೆಳಕಾಗಿ ಬೆಂಕಿಯಾಗಿ ಉರಿದು ಬಿಡೋಣ...

ನಾನು ನೀನೆಂಬ ಎಲ್ಲ ಭೇಧಗಳ ತೊರೆದು..
ಅಹಂಕಾರವ ಸುಟ್ಟು..
ಹೊಸತೊಂದು ರೂಪದಲಿ ಐಕ್ಯವಾಗೋಣ

ಅಗತ್ಯವಿಲ್ಲದವನಿಗೆ 
ನೀಡುವ ಅನ್ನಕ್ಕೂ..  ಪ್ರೀತಿಗೂ 
ಬೆಲೆಯೇ ಇಲ್ಲ .. 

        +

ಅಗತ್ಯ ಮುಗಿದ ಮೇಲೆ .. 
ತಲೆ ಮೇಲಿನ ನೆರಳು ಕೂಡ 
ಭಾರವೆನಿಸುತ್ತದೆ .. 
        
       +

ನೀನು ಬರುವ ಮುಂಚೆಯೇ ಚೆನ್ನಾಗಿತ್ತು ... 
ಏನಿಲ್ಲವೆಂದರೂ.. 
ನೀನು ಬರುತ್ತೀಯೆಂಬ ನಿರೀಕ್ಷೆಯಾದರೂ 
ಜೊತೆಗಿತ್ತು .. 

        +

ನಿನ್ನ ಪ್ರೇಮ  ಯಜ್ಞದಲ್ಲಿ 
ನಾ 
​ಸಮಿಧೆಯಾಗಿ 
ಉರಿದು ಹೋಗುತ್ತಿದ್ದೇನೆ.......  
        
          +

ನೀನು ಮರಳಿ ಬಂದ ಖುಷಿಗೆ...
ಮನಸು ಒದ್ದೆ ನೆಲ...
ಎಲ್ಲೋ ಹುಗಿತು ಮರೆತಿದ್ದ..
ಕನಸ ಬೀಜಗಳಿಗೀಗ 
ಮೊಳಕೆಯೊಡೆಯುವ ತವಕ...
ಎದೆಯೊಳಗೆ..
ನವಿರು ಪುಳಕ....

​      +​

ಹಳೆಯ ಪ್ರೇಮದ ನೆನಪನು..
ಪ್ರೀತಿಸು...
ಆ ಮೂಲಕ ಬದುಕನ್ನೂ ಪ್ರೀತಿಸಬಹುದು..