Saturday, December 27, 2014

ಮಾಘಿಯ ಚಳಿಗೆ ಮೈ ಮನಸು 
ಗದಗುಟ್ಟಿದೆ.. 
 ನಿನ್ನವೊಂದಿಷ್ಟು ಬಿಸಿಮುತ್ತುಗಳ 
ಕಳಿಸಿಕೊಡು ದೊರೆಯೇ .. 
ರಜಾಯಿ ಹೊಲಿದು ಹೊದ್ದುಕೊಳ್ಳುತ್ತೇನೆ . 
             **

ಇಬ್ಬನಿಯನು ಪ್ರೀತಿಸಿದರೆ ಹೀಗೇ 
ಆರಿಸಿಕೊಳ್ಳುವ ಮುನ್ನವೇ 
ಆವಿಯಾಗುವ ಭಯವಿರುತ್ತದೆ . 
             **

ಮಾಘಿಯ ಮೋಹಕ ಬಿಸಿಲೇ .. 
ಮಂಜುಗಟ್ಟಿದ ಅವನೆದೆಯನ್ನೊಮ್ಮೆ ಮುಟ್ಟಿ ಬಾ 
ಕರಗಲಿ ಅವನ ಮುನಿಸು ಬೇಸರ 
ಹರಿಯಲಿ ತಡೆದಿಟ್ಟ ಪ್ರೇಮ .. 
ಸುರಿಯಲಿ ಇಬ್ಬನಿ 
ತೊಡೆಯಲೆನ್ನ ಕಂಬನಿ ..
            **

ನಿನ್ನ ವಿರಹದುರಿಗೆ 
ಹೂಗಳು ಸುಡುತ್ತಿವೆ .. 
ಓ ಇಬ್ಬನಿಯೇ .. 
ಮುತ್ತಾಗಿ ಒಮ್ಮೆ ಹನಿದು ಬಿಡು
           **

ಎದೆಯೊಳಗೆ ಬಿಡುವಿಲ್ಲದೆ 
ಅರಳಿಕೊಳ್ಳುತ್ತಿರುವ ಅದೆಷ್ಟೋ ಪುಳಕದ ಹೂಗಳ
 ನೇಯ್ದು ಮಾಲೆಯಾಗಿಸಬೇಕಿದೆ 
ಆದರೆ
 ಅವನ ಪ್ರೇಮದ  ತೀವ್ರತೆಗೆ
 ಪದಗಳು ಚೆದುರಿ ..ಕವಿತೆಯೂ ಸೋಲುತ್ತಿದೆ 
ಓ ಶಿಶಿರದ ತಂಗಾಳಿಯೇ 
ಈ ಒಲವ ಪರಿಮಳವನ್ನಷ್ಟು ಹೊತ್ತು ಹೋಗು 
ಕಡಲ ತೀರದ ನನ್ನ ದೊರೆಗೆ ನೀಡು 

            **

 ಕೆನ್ನೆಗೆ ಅರಸಿನ ಹಚ್ಚಿ ಮಲಗಿದ 
ನೆನಪಿತ್ತು.. 
ಬೆಳಗೆದ್ದಾಗ ರಂಗು ಕರಗಿತ್ತು .. 
ಕಾವಳದ ರಾತ್ರಿಯಲಿ 
ಮಾಯಕದ ಬೆಕ್ಕು 
ಹಾಲು ನೆಕ್ಕಿ ಹೋಗಿತ್ತು .. 
ನಿನ್ನೊಲವಿನಂತೆ  ಅರಳಿಕೊಂಡ 
ಮುಂಜಾನೆ ಹೂಗಳಿಗೆ 
ತುಟಿಯೊತ್ತಿದ ಕಳ್ಳ ಇಬ್ಬನಿ 
ಹುಳ್ಳಗೆ ನಗುತ್ತಿತ್ತು..
      ***

ಎದೆಯೊಳಗೆ ಕೆಂಡ 
ಮಳೆಗರೆಯುತ್ತಿತ್ತು 
ಬೇಸರದ ಬಿಸಿಲು 
ನೆತ್ತಿ ತೋಯಿಸುತ್ತಿತ್ತು ..
ಯಾವ ಜನ್ಮದ 
​ಋಣವೋ .. 
ಅಕಳಂಕಿತ ​ಇಬ್ಬನಿ 
ತುಟಿಯೊತ್ತಿ ಹೇಳಿತು .. 
ಬಾ ಗೆಳತಿ ,
ನೀರಡಿಸಿಕೋ ..
       ***

ಬದುಕು ಚಳಿಗಾಲದ ಸಂಜೆಯ
ಒಂಟಿತನದಂತೆ ಕ್ರೂರವಾಗಿತ್ತು
ಶಿಶಿರದ ಶೀತಲತೆಯಲಿ
ಭರವಸೆಗಳು ಕೂಡ ಉದುರಿಹೋಗಿ 
​ಬಾಳು ಬೋಳು ಬೋಳಾಗಿತ್ತು .. 
​ದೊರೇ ,
ನೀ ಬಂದದ್ದೇ ನೋಡು ! 
ನಾ ವಸಂತ ಚುಂಬಿಸಿದ ಹೂ ಬನವಾಗಿದ್ದೇನೆ . 
          ***

ಕರುಣೆಯಿಲ್ಲದ ಚಳಿಗಾಲದ ರಾತ್ರಿಯೇ 
ನಿನಗೆ ಏನನ್ನಲಿ .. 
ನಲ್ಲನಿಲ್ಲದ ಹೊತ್ತಿಗಿಷ್ಟು ನಿದ್ರೆಯನಾದರೂ 
ಜಾರಿಗೊಳಿಸು ..
ಅವನ ಕನಸಿನ ಕಾವಿನಲಾದರೂ 
ತುಸು ಬೆಚ್ಚಗಾಗುತ್ತೇನೆ . 
           **

ನಿನ್ನ ನೆನಪಿನ ಅಗ್ಗಿಷ್ಟಿಕೆಯಲ್ಲಿ 
ಚಳಿ ಕಾಯಿಸಿಕೊಳ್ಳುತ್ತಿದ್ದೇನೆ 
ಮಧುರವಾಗಿ ಉರಿಯುತ್ತಿರುವ ಬೆಂಕಿಗೆ 
ಕಡಲ ತೀರದ ಗಾಳಿ ಬಿಸಿಯಾಗುತ್ತಿದೆ 
             **

ಗಿಜಿಗುಡುವ ಸಂತೆಯೊಳಗೆ 
ನೂರೆಂಟು ಮುಖಗಳು .. 
ಬಗೆಬಗೆ ಮುಖವಾಡಗಳು .. 
ಗಳಿಗೆಯಲಿ ಬದಲಾಗುವ ಬಣ್ಣಗಳು 
ಗುರುತಿನ ಹಂಗಿಲ್ಲದೆ ಬೆರೆತ
ಎಷ್ಟೊಂದು ಮಂದಿ 
ಬಿಕರಿಯ ತುದಿಯಲ್ಲಿ ಸಂಧಿಸುತ್ತವೆ 
ನಿರೀಕ್ಷೆ ನಿರಾಸೆಗಳು .. 

ತರಕಾರಿ ,ಮೀನು ,ಮಾಂಸ 
ಬಲೂನು ,ಬೆಂಡು ,ಬತ್ತಾಸು.. 
ಜಗಮಗಿಸುವ  ಫ್ಯಾನ್ಸಿ ಸ್ಟೋರು 
ನಡುವೆ ಡಿಸ್ಕೌಂಟಿನ ಆಫರು ..  
ಹಳೇ  ಮಾಲಿನ  ಹರಾಜಿನಂಗಡಿ
ಬಡವನ ಕಣ್ಣಲಿ ಕನಸಿನ ದಾಂಗುಡಿ 
ಗಲ್ಲಿಯೊಳಗಿನ ಮುರುಕು ಬಾರು 
ಹಗಲಿನಲ್ಲೇ  ಅರಳಿಕೊಂಡ 
ಸಂಜೆ ಮಲ್ಲಿಗೆಯ ಕಾರುಬಾರು 

ಎಲ್ಲವೂ ಮಾರಾಟಕ್ಕಿದೆ .. 
ಮಾರುತ್ತಿರುವವನಷ್ಟೇ ಅಲ್ಲ .. 
ಕೊಳ್ಳಬಂದವನೂ ಮಾರಿಕೊಂಡವನೇ 
ತೆರೆದ ಸಂತೆಯೊಳಗೆ ಏನುಂಟು ಏನಿಲ್ಲ 
ಬೆವರು,ಬೇಸರ, ನಲಿವು, ನೋವು ..   
ಆಸೆ ,ಮೋಸ , ನ್ಯಾಯ, ಅನ್ಯಾಯ.. 
ಸಂತೆಯೊಂದು ಪುಟ್ಟ ಜಗತ್ತು 
ಜಗತ್ತೊಂದು ದೊಡ್ಡ ಸಂತೆ.. 
ಅಪ್ಪನ ಕೈ ಹಿಡಿದು ನಡೆವ 
ಮಗುವಿನಲ್ಲಿ ಪ್ರಶ್ನೆಗಳ ಕಂತೆ .. 
ಬಿಡುವಿಲ್ಲದ ಅಪ್ಪನಿಗೆ ಕೊನೆಯಿಲ್ಲದ ಚಿಂತೆ .. 

ಮುಖವಾಡದ ಅಂಗಡಿಯ ಮುಂದೆ 
ಕೈ ಜಗ್ಗುವ ಮಗು.. 
ಗದರುವ ಅಪ್ಪನಿಗದು ವೃಥಾ ಖರ್ಚು 
ದಿನಕ್ಕೆಷ್ಟು ಬಾರಿ ಬದಲಿಸುತ್ತಾನೋ 
ತೆಗೆದು ತಳ್ಳಿದ ಉಸಿರಿನಂತೆ .. 
ಎಣಿಕೆಗೆ ದಕ್ಕದ ಲೆಕ್ಕ..
ಲೋಕವರಿಯದ ಮಗುವಿಗೆ 
ಬಣ್ಣ ಬೆಡಗಿನ  ಸೆಳೆತ ..  

ಮುಖವಾಡ ಬೇಕೆಂದು .. 
ಅಳುವ ಮಗುವಿಗೆ 
ಮುಂದೊಮ್ಮೆ,ತಾನೂ 
ಬಗೆಬಗೆ ಮುಖವಾಡ 
ತೊಡುತ್ತೇನೆಂದು ಗೊತ್ತಿಲ್ಲ​.. 
ಸುಮ್ಮನೆ  ಮುಂದೆ ಸಾಗುವ ಅಪ್ಪನಿಗೆ 
ತಾನು ಮಗುವಾಗಿದ್ದಾಗ
ತನ್ನಲ್ಲಿಯೂ  ಮುಖವಾಡ 
ಇರಲಿಲ್ಲವೆಂಬುದೀಗ   ನೆನಪಿಲ್ಲ