Monday, May 5, 2014

ಸದ್ದು ಮಾಡದೆ ಸರಿವ 
ವಯಸ್ಸು .. 
ಮತ್ತೊಂದು ಸುತ್ತು ಬಿಗಿಗೊಂಡ 
ಕಾಲನ ಕುಣಿಕೆ .. 
ಮತ್ತಷ್ಟು  ಹೊಳಪು ಕಳಕೊಂಡ 
ಚರ್ಮದಡಿ .. 
ಮೆಲ್ಲಗೆ ಮಡಿಸಿಕೊಂಡ 
ಮತ್ತೊಂದು ನೆರಿಗೆ .. 

ನಾಜೂಕಾಗಿ ಜಾರುತ್ತಿರುವ 
ಕಾಲ ,ಋತು ಪರ್ವಗಳ 
ನಿರ್ವಿಕಾರತೆಯೆದುರು .. 
ಸೋಲಲೇ ಬೇಕಾದ ಅನಿವಾರ್ಯತೆ .. 
ನಿಲ್ಲುವುದಿಲ್ಲ ಕಾಲ 
ಸುಮ್ಮನಿದ್ದರೆ ಹೋಯಿತು .. 
ಸುಮ್ಮನಿರದಿದ್ದರೂ ... 


ಬದುಕು ಬಟಾಬಯಲು .. 
ತೋರಿದಲೆಲ್ಲಾ ದಾರಿ 
ಅನೂಹ್ಯ ಗಮ್ಯದೆಡೆ 
ಅವಿರತ ಪಯಣ ... 
ನಡೆದರೂ ,ನಿಂತರೂ 
ಪಯಣ ನಿಲ್ಲುವುದಿಲ್ಲ .. 
ಕಾಲ ಎಸ್ಕಲೇಟರು .. ! 

ಬದುಕು ಬಣ್ಣದ ಪಟ .. 
ಎತ್ತರಕ್ಕೇರಿದಷ್ಟೂ ಚಿಕ್ಕದೆನಿಸುವ 
ಜಗತ್ತು .. 
ಹಾರಿದಷ್ಟೂ ಅಗಾಧ ಆಕಾಶ .. 
ಎಲ್ಲ ನಿಮಿತ್ತ ... 
ಕಾಲನ ಕೈಯಲ್ಲಿ 
ಬಾಲಂಗೋಚಿ .. !

ಕಂಡಷ್ಟು ಕಂಡು .. 
ಉಂಬಷ್ಟು ಉಂಡು .. 
ಇಟ್ಟಷ್ಟು ಪಡೆದು .. 
ತಾನಷ್ಟು ಕೊಟ್ಟು .. 
ಗಳಿಸಿದಕ್ಕೂ ಉಳಿಸಿದಕ್ಕೂ 
ಲೆಕ್ಕ ಮರೆತು ,ದುಃಖ ಮರೆತು 
ಸಾಗುವುದ್ಯಾವ ಊರಿಗೆ .. 
ದೇಹ ಮರಳಿ ಮಣ್ಣಿಗೇ