Saturday, December 27, 2014

ಗಿಜಿಗುಡುವ ಸಂತೆಯೊಳಗೆ 
ನೂರೆಂಟು ಮುಖಗಳು .. 
ಬಗೆಬಗೆ ಮುಖವಾಡಗಳು .. 
ಗಳಿಗೆಯಲಿ ಬದಲಾಗುವ ಬಣ್ಣಗಳು 
ಗುರುತಿನ ಹಂಗಿಲ್ಲದೆ ಬೆರೆತ
ಎಷ್ಟೊಂದು ಮಂದಿ 
ಬಿಕರಿಯ ತುದಿಯಲ್ಲಿ ಸಂಧಿಸುತ್ತವೆ 
ನಿರೀಕ್ಷೆ ನಿರಾಸೆಗಳು .. 

ತರಕಾರಿ ,ಮೀನು ,ಮಾಂಸ 
ಬಲೂನು ,ಬೆಂಡು ,ಬತ್ತಾಸು.. 
ಜಗಮಗಿಸುವ  ಫ್ಯಾನ್ಸಿ ಸ್ಟೋರು 
ನಡುವೆ ಡಿಸ್ಕೌಂಟಿನ ಆಫರು ..  
ಹಳೇ  ಮಾಲಿನ  ಹರಾಜಿನಂಗಡಿ
ಬಡವನ ಕಣ್ಣಲಿ ಕನಸಿನ ದಾಂಗುಡಿ 
ಗಲ್ಲಿಯೊಳಗಿನ ಮುರುಕು ಬಾರು 
ಹಗಲಿನಲ್ಲೇ  ಅರಳಿಕೊಂಡ 
ಸಂಜೆ ಮಲ್ಲಿಗೆಯ ಕಾರುಬಾರು 

ಎಲ್ಲವೂ ಮಾರಾಟಕ್ಕಿದೆ .. 
ಮಾರುತ್ತಿರುವವನಷ್ಟೇ ಅಲ್ಲ .. 
ಕೊಳ್ಳಬಂದವನೂ ಮಾರಿಕೊಂಡವನೇ 
ತೆರೆದ ಸಂತೆಯೊಳಗೆ ಏನುಂಟು ಏನಿಲ್ಲ 
ಬೆವರು,ಬೇಸರ, ನಲಿವು, ನೋವು ..   
ಆಸೆ ,ಮೋಸ , ನ್ಯಾಯ, ಅನ್ಯಾಯ.. 
ಸಂತೆಯೊಂದು ಪುಟ್ಟ ಜಗತ್ತು 
ಜಗತ್ತೊಂದು ದೊಡ್ಡ ಸಂತೆ.. 
ಅಪ್ಪನ ಕೈ ಹಿಡಿದು ನಡೆವ 
ಮಗುವಿನಲ್ಲಿ ಪ್ರಶ್ನೆಗಳ ಕಂತೆ .. 
ಬಿಡುವಿಲ್ಲದ ಅಪ್ಪನಿಗೆ ಕೊನೆಯಿಲ್ಲದ ಚಿಂತೆ .. 

ಮುಖವಾಡದ ಅಂಗಡಿಯ ಮುಂದೆ 
ಕೈ ಜಗ್ಗುವ ಮಗು.. 
ಗದರುವ ಅಪ್ಪನಿಗದು ವೃಥಾ ಖರ್ಚು 
ದಿನಕ್ಕೆಷ್ಟು ಬಾರಿ ಬದಲಿಸುತ್ತಾನೋ 
ತೆಗೆದು ತಳ್ಳಿದ ಉಸಿರಿನಂತೆ .. 
ಎಣಿಕೆಗೆ ದಕ್ಕದ ಲೆಕ್ಕ..
ಲೋಕವರಿಯದ ಮಗುವಿಗೆ 
ಬಣ್ಣ ಬೆಡಗಿನ  ಸೆಳೆತ ..  

ಮುಖವಾಡ ಬೇಕೆಂದು .. 
ಅಳುವ ಮಗುವಿಗೆ 
ಮುಂದೊಮ್ಮೆ,ತಾನೂ 
ಬಗೆಬಗೆ ಮುಖವಾಡ 
ತೊಡುತ್ತೇನೆಂದು ಗೊತ್ತಿಲ್ಲ​.. 
ಸುಮ್ಮನೆ  ಮುಂದೆ ಸಾಗುವ ಅಪ್ಪನಿಗೆ 
ತಾನು ಮಗುವಾಗಿದ್ದಾಗ
ತನ್ನಲ್ಲಿಯೂ  ಮುಖವಾಡ 
ಇರಲಿಲ್ಲವೆಂಬುದೀಗ   ನೆನಪಿಲ್ಲ  

No comments:

Post a Comment